ನಮ್ಮ ಹಾಸನ ಜಿಲ್ಲೆಯು ಶಿಲ್ಪಕಲೆ ಹಾಗೂ ಪ್ರಕೃತಿ ಸೌಂದರ್ಯದ ನೆನಬಿಡು. ಹಾಸನ ಎಂದ ಕ್ಷಣ ಕಣ್ಮುಂದೆ ಬರುವುದೇ ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳದ ಗೊಮ್ಮಟ ಮತ್ತು ಸಕಲೇಶಪುರ.
ಆದರೆ ಜನರ ಮನಸೂರೆಗೊಳ್ಳುವ ಅಗಾದ ಸಂಪತ್ತು ಹೊಯ್ಸಳ ದೇವಾಲಯಗಳು ಹಾಸನದ ಮೂಲೆ ಮೂಲೆಗಳಲ್ಲೂ ಕಂಡು ಬರುತ್ತವೆ.
ಹಾಸನದ ಪ್ರಮುಖ ದೇವಾಲಯಗಳಲ್ಲಿ ಹಾಸನದಿಂದ ಬೆಂಗಳೂರು ಮಾರ್ಗವಾಗಿ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಶಾಂತಿಗ್ರಾಮ ಎಂಬಲ್ಲಿರುವ ಶ್ರೀ ಲಕ್ಷ್ಮಿ ವರದಯೋಗಭೋಗ ನರಸಿಂಹ ಸ್ವಾಮಿ ದೇವಸ್ಥಾನ ಯಾತ್ರಿಕರಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿದೆ.
ಹಾಸನ ಜಿಲ್ಲೆಯ ಶಾಂತಿ ಗ್ರಾಮ ಎಂಬ ಊರಿನಲ್ಲಿ ಒಂದು ವಿಶೇಷ ಅಡಗಿದೆ ಈ ದೇವಾಲಯವನ್ನು ಹೊಯ್ಸಳರ ದೊರೆಯಾದ ವಿಷ್ಣುವರ್ಧನ ತನ್ನ ರಾಣಿ ಶಾಂತಲೆಗಾಗಿ ನಿರ್ಮಿಸಿದರೆಂದು ಎಂಬ ಸಂಗತಿ ಇತಿಹಾಸದ ಪುಟಗಳಿಂದ ತಿಳಿದು ಬಂದಿದೆ. ಶಾಂತಲೆಯ ಹೆಸರಿನಿಂದಾಗಿಯೇ ಈ ಗ್ರಾಮಕ್ಕೆ ಶಾಂತಿ ಗ್ರಾಮ ಎಂಬ ಹೆಸರು ಬಂದಿದೆ.
ಶಾಂತಿಗ್ರಾಮದಲ್ಲಿ ಸೌಮ್ಯಕೇಶವ ದೇವಾಲಯ, ಧರ್ಮೇಶ್ವರ ದೇವಾಲಯ, ವೀರಭದ್ರ ದೇವಾಲಯ, ಶ್ರೀ ಲಕ್ಷ್ಮಿ ವರದಯೋಗಭೋಗ ನರಸಿಂಹ ಸ್ವಾಮಿ ದೇವಾಲಯಗಳಿವೆ. ಶಾಂತಿಗ್ರಾಮದ ಕೆರೆಯ ತಟದಲ್ಲಿ ಶ್ರೀ ಲಕ್ಷ್ಮಿ ವರದಯೋಗಭೋಗ ನರಸಿಂಹಸ್ವಾಮಿ ದೇವಾಲಯವಿದೆ. ಶಾಂತಿಗ್ರಾಮದ ಲಕ್ಷ್ಮಿ ಸಮೇತ ಶ್ರೀ ವರದ ಯೋಗಭೋಗ ನರಸಿಂಹ ಸ್ವಾಮಿ ದೇವಾಲಯವನ್ನು ಸುಮಾರು 12ನೆಯ ಶತಮಾನದ ಪ್ರಾಚೀನ ದೇವಾಲಯ ಎನ್ನಲಾಗುತ್ತದೆ.
1922ನೇ ಇಸವಿಯಲ್ಲಿ ಹೊಯ್ಸಳರ ದೊರೆಯಾದ ವೀರ ಬಲ್ಲಾಳರ ಆಳ್ವಿಕೆ ಕಾಲದಲ್ಲಿ ಅಚ್ಚಲ ಪ್ರಕಾಶ ಮುನಿಗಳಿಂದ ಶ್ರೀ ವರದ ಯೋಗ ಭೋಗ ನರಸಿಂಹ ಸ್ವಾಮಿ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯದಲ್ಲಿ ಇರುವಂತಹ ನರಸಿಂಹಸ್ವಾಮಿ ವಿಗ್ರಹ ಚೋಳರ ಕಾಲಾವಧಿಗಿಂತಲೂ ಹಳೆಯದ್ದು ಎನ್ನಲಾಗುತ್ತದೆ.
ಸಾಮಾನ್ಯವಾಗಿ ಲಕ್ಷ್ಮೀನರಸಿಂಹ ಸ್ವಾಮಿ ಎಂದರೆ ಶ್ರೀ ಲಕ್ಷ್ಮಿ ದೇವಿ ನರಸಿಂಹ ಸ್ವಾಮಿಯವರ ತೊಡೆಯ ಮೇಲೆ ಕುಳಿತಿರುವುದನ್ನು ನಾವು ಕಂಡಿರುತ್ತೇವೆ. ಆದರೆ ಶಾಂತಿ ಗ್ರಾಮದಲ್ಲಿ ಇರುವಂತಹ ನರಸಿಂಹ ಸ್ವಾಮಿಯ ತೊಡೆಯ ಮೇಲೆ ಲಕ್ಷ್ಮಿ ದೇವಿ ಕುಳಿತಿಲ್ಲ ಬದಲಿಗೆ ದೇವರ ಕೆಳಗಡೆ ಲಕ್ಷ್ಮಿ ದೇವಿಯ ವಿಗ್ರಹವಿದೆ.
ಸಾಮಾನ್ಯವಾಗಿ ಚತುರ್ಬಾಹು ನರಸಿಂಹಸ್ವಾಮಿ ಬಲ ಕೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಶಂಖ ಕಂಡು ಬರುತ್ತದೆ. ಆದರೆ ಶಾಂತಿ ಗ್ರಾಮದಲ್ಲಿ ಇರುವಂತಹ ನರಸಿಂಹ ಸ್ವಾಮಿಯವರು ಬಲಗೈಯಲ್ಲಿ ಶಂಖ ಎಡಗೈಯಲ್ಲಿ ಚಕ್ರ ಹಿಡಿದಿರುವುದು ಇಲ್ಲಿನ ವಿಶೇಷತೆ. ಸ್ವಾಮಿಯವರು ಯೋಗಾರೂಢರಾಗಿ ನಿತ್ಯವೂ ಪೂಜಿಸಿಕೊಳ್ಳುತ್ತಾರೆ.
ಯೋಗ ಭೋಗವನ್ನು ಹೊಂದಿರುವಂತಹ ಸ್ವಾಮಿಯ ವಿಗ್ರಹ ಇದಾದ್ದರಿಂದ ಸ್ವಾಮಿಯವರಿಗೆ ಶ್ರೀ ಯೋಗಭೋಗ ನರಸಿಂಹ ಸ್ವಾಮಿ ಎಂಬ ಹೆಸರು ಬಂದಿದೆ. ಕಳೆದ ಎರಡು ಸಾವಿರ ವರ್ಷಗಳಿಂದಲೂ ನಿರಂತರವಾಗಿ ನರಸಿಂಹ ಸ್ವಾಮಿ ಅವರ ಆರಾಧನೆ ನಡೆಯುತ್ತಿರುವುದರಿಂದ ದೇಗುಲದಲ್ಲಿ ಅತ್ಯಂತ ಜಾಗೃತ ಕ್ಷೇತ್ರ ಎನಿಸಿಕೊಳ್ಳುತ್ತದೆ.
ಈ ದೇವಾಲಯದಲ್ಲಿ ಉಪವಾಸದಿಂದಿದ್ದು ಶುಚಿತ್ವರಾಗಿ ಪ್ರತಃಕಾಲದಲ್ಲಿ 48 ಪ್ರದಕ್ಷಣೆಗಳನ್ನು ಮಾಡುವುದರಿಂದ ಇಷ್ಟಾರ್ಥಗಳೆಲ್ಲವೂ ಸಿದ್ಧಿಸುದೆಂಬ ಪ್ರತೀತಿ ಇದೆ. ಭಕ್ತರ ಇಷ್ಟಾರ್ಥಗಳು ನೆರವೇರಿದ ನಂತರ ಯಾವುದಾದರೂ ಒಂದು ಸುದಿನ ದೇವಾಲಯಕ್ಕೆ ಭೇಟಿಯನ್ನು ನೀಡಿ ಅಂದು ದೇವಾಲಯಕ್ಕೆ ಬರುವಂತಹ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದವನ್ನು ನೀಡುವಂತಹ ಪ್ರತೀತಿ ಇದೆ.
ಅಹೋಬಲದ ನರಸಿಂಹ ಸ್ವಾಮಿಯ ಇಲ್ಲಿಯೇ ಆಗಲೆಂದು ಶಾಂತಿ ಗ್ರಾಮದಲ್ಲಿ ಶ್ರೀ ವರದ ಯೋಗಭೋಗ ನರಸಿಂಹ ಸ್ವಾಮಿಯ ದೇವಾಲಯದಲ್ಲಿ ನವರಂಗದ ಚಾವಣಿಯ ಮೇಲೆ ನವ ನರಸಿಂಹ ಮೂರ್ತಿಗಳ ಕೆತ್ತನೆಯನ್ನು ಮಾಡಲಾಗಿದೆ.
ಈ ನರಸಿಂಹರ ಒಂಬತ್ತು ರೂಪಗಳೆಂದರೆ ಉಗ್ರ ನರಸಿಂಹ, ಭೋಗ ನರಸಿಂಹ, ವೀರ ನರಸಿಂಹ, ವಿಳಂಬ ನರಸಿಂಹ, ಕೋಪ ನರಸಿಂಹ, ಯೋಗ ನರಸಿಂಹ, ಸುದರ್ಶನ ನರಸಿಂಹ, ಹಾಗೂ ಲಕ್ಷ್ಮೀ ನರಸಿಂಹ.
ಹೊಯ್ಸಳರ ಕಾಲದ ಶಿಲ್ಪಕಲಾ ಕೆತ್ತನೆಗಳಿರುವಂತಹ ಕಂಬಗಳು ಇಲ್ಲಿ ಕಾಣಿಸುತ್ತದೆ. ಜಿಲ್ಲಾ ಕೇಂದ್ರ ಹಾಸನದಿಂದ ಕೇವಲ 13 ಕಿ.ಮೀ ಅಂತರದಲ್ಲಿ ಶಾಂತಿ ಗ್ರಾಮವಿದೆ.